ಉಡುಪಿ : ವ್ಯಕ್ತಿನಿಷ್ಠತೆಯ ಬದಲಾಗಿ ನಿರ್ವಹಣೆಯ ಪ್ರತಿಯೊಂದು ಅಂಶವನ್ನು ವಿಮರ್ಶಾತ್ಮಕವಾಗಿ ವಸ್ತುನಿಷ್ಠತೆಯಿಂದ ಅಧ್ಯಯನ ಮಾಡುವುದರಿಂದ ಆಧುನಿಕ ವ್ಯವಸ್ಥಾಪಕರು ಯಶಸ್ಸನ್ನು ಪರಿಣಾಮಕಾರಿಯಾಗಿ ಬಗಲಿಗೇರಿಸಿಕೊಳ್ಳಬಹುದು. ಕೆಲಸದ ಸ್ಥಳದಲ್ಲಿನ ಸಮಸ್ಯೆಗಳು ಮತ್ತು ಸಂಕೀರ್ಣತೆಗಳನ್ನು ವಸ್ತುನಿಷ್ಠ ಮೌಲ್ಯಮಾಪನಗಳಿಂದ ನಿವಾರಿಸಿಕೊಳ್ಳಬಹುದು. ಇಂದಿನ ವ್ಯವಸ್ಥಾಪಕರು ವಿಶ್ಲೇಷಣಾತ್ಮಕ ವೀಕ್ಷಣೆ ಮತ್ತು ಚಿತ್ರಿತ ಚಿಂತನೆಯನ್ನು ಮೈಗೂಡಿಸಿಕೊಳ್ಳುವುದು ಅತ್ಯಂತ ಅಗತ್ಯ ಎಂದು ಪ್ರಖ್ಯಾತ ಶಿಕ್ಷಣ ತಜ್ಞ, ಸಮಾಜಶಾಸ್ತ್ರಜ್ಞ ಮತ್ತು ಚಿಂತಕರಾದ ಪೆÇ್ರ. ಪಿ. ಶ್ರೀಪತಿ ತಂತ್ರಿ ಅವರು ಅಭಿಪ್ರಾಯ ಪಟ್ಟರು.
ಎರಡೂವರೆ ಸಾವಿರ ವರ್ಷಗಳ ಹಿಂದೆ ತಕ್ಷಶಿಲೆ ಐದು ಸಾವಿರ ವಿದ್ಯಾರ್ಥಿಗಳ ಜ್ಞಾನದಾಹ ನೀಗಿಸುವ ವಿದ್ಯಾಸಂಸ್ಥೆ ಆಗಿತ್ತು. ಖ್ಯಾತ ವ್ಯಾಕರಣ ಶಾಸ್ತ್ರಜ್ಞ ಪಾಣಿನಿ, ಅರ್ಥಶಾಸ್ತ್ರಜ್ಞ ಹಾಗೂ ನಿಪುಣ ತಂತ್ರಜ್ಞನಾದ ಚಾಣಾಕ್ಯ ತಕ್ಷಶಿಲೆಯಿಂದಲೇ ಹೊರಹೊಮ್ಮಿದವರು. ಪ್ರಜಾಪ್ರಭುತ್ವದ ಕಲ್ಪನೆಯು ವಿಫಲಗೊಳ್ಳಬಹುದು ಆದರೆ ಚಾಣಕ್ಯನ ಆಡಳಿತಾತ್ಮಕ ವ್ಯವಸ್ಥೆಯು ಚಿರಸ್ಥಾಯಿಯಾದದ್ದು ಎಂದು ಅವರು ಪೂರ್ಣಪ್ರಜ್ಞ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ನಲ್ಲಿ ‘ನಿರ್ವಹಣಾ ಶಾಸ್ತ್ರದ ಮೂಲ ಮತ್ತು ಬೆಳವಣಿಗೆಯ ಬೌದ್ಧಿಕ ಹಿನ್ನಲೆ’ ಎಂಬ ವಿಷಯದ ಬಗ್ಗೆ ಅಯೋಜಿಸಲಟ್ಟ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟರು.
ಪಿ.ಐ.ಎಂ. ನ ನಿರ್ದೇಶಕರಾದ ಡಾ| ಭರತ್ ವಿ., ಅವರು ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಸಂವಹನದಲ್ಲಿ ಪಾಲ್ಗೊಂಡರು. ದ್ವಿತೀಯ ಎಂ.ಬಿ.ಎ. ವಿದ್ಯಾರ್ಥಿಗಳಾದ ಕುಮಾರಿ ಜೆನಿಸಿಯ, ಕುಮಾರಿ ಶಿಲ್ಪ ಹಾಗೂ ಕುಮಾರಿ ನಿರೀಕ್ಷ ಕಾರ್ಯಕ್ರಮ ಸಂಯೋಜಿಸಿದರು.